ಬ್ಯಾಂಗ್, ಬಿ ಎಲ್ ಎಫ್	
	1848-1932. ಡೆನ್ಮಾರ್ಕಿನ ಪಶುವೈದ್ಯ. 1848 ಜೂನ್ 7ರಂದು ಜನನ. ಕೂಪನ್ ಹೇಗನ್ ವಿಶ್ವವಿದ್ಯಾಲಯದ ಪಶುವೈದ್ಯ ಮತ್ತು ವ್ಯವಸಾಯ ಕಾಲೇಜಿನಲ್ಲಿ ಅಧ್ಯಯನ. 1880ರಲ್ಲಿ ಎಮ್.ಡಿ. ಪದವಿ ಪಡೆದು ರಾಯಲ್ ಪಶುವೈದ್ಯಶಾಲೆಯಲ್ಲಿ ಶಿಕ್ಷಕನಾದ. ಮುಂದೆ ಅದೇ ಶಾಲೆಯ ವ್ಯವಸ್ಥಾಪಕ ಕೂಡ ಆದ. ದನಗಳಲ್ಲಿ ಸೋಂಕಿನಿಂದ ಉಂಟಾಗುತ್ತಿದ್ದ ಮೈ ಇಳಿತಕ್ಕೆ (ಗರ್ಬಪಾತ) ಕಾರಣವಾದ ರೊಗಾಣು ಬ್ರುಸೆಲ್ಲಾ ಅಬಾರ್ಟಸ್ ನ ಶೋಧ ಇವನ ಮಹತ್ತರ ಸಾಧನೆ. ಮಾನವನಲ್ಲಿ ಬ್ರೂಸೆಲ್ಲೊಸೀಸ್ ರೋಗಕ್ಕೆ ಕಾರಣ ಬ್ರೂಸೆಲ್ಲಾ ಅಬಾರ್ಟಸ್ ರೋಗಾಣು ಎಂದು ಗೊತ್ತಾದಾಗ ಬ್ಯಾಂಗ್ ಅದನ್ನು ಆ ಮೊದಲೇ ಪತ್ತೆ ಹಚ್ಚಿದುದಕ್ಕೆ ಇನ್ನೂ ಹೆಚ್ಚಿನ ಪ್ರಾಮುಖ್ಯ ಬಂದಿತು. ಬ್ಯಾಂಗ್‍ನ ಇತರ ಶೋಧಗಳಲ್ಲಿ ಮುಖ್ಯವಾದುದು ದನಗಳಲ್ಲಿ ಬರುವ ಕ್ಷಯರೋಗದ ಕಾರಣದ ಪತ್ತೆ. ರೋಗದಿಂದ ನರಳುತ್ತಿದ್ದ ಹಸುಗಳ ಕರುಗಳನ್ನು ಬೇರ್ಪಡಿಸಿ ಅವಕ್ಕೆ ರೋಗವಿಲ್ಲದ ಹಸುಗಳ ಹಾಲು ಕೊಟ್ಟು ರೋಗ ನಿವಾರಿಸುತ್ತಿದ್ದ ಕ್ರಮ, ಮೈಲಿ ಬೇನೆಗೆ ಹಾಕುವ ದೇವಿಮದ್ದಿನ ಅನ್ವೇಷಣೆ, ಆಕ್ಟಿಮೋ ಮೈಕೋಸಿಸ್, ಹಂದಿಗಳಿಗೆ ಬರುವ ಜ್ವರ ಮತ್ತಿತರ ಕಾಯಿಲೆಗಳು, ಜೋನ್ಸ್ ಕಾಯಿಲೆ ಇತ್ಯಾದಿ. ಇವನು ಅನೇಕ ವರ್ಷಗಳ ಕಾಲ ಡಯಾನಿಷ್ ಸರ್ಕಾರಕ್ಕೆ ಪಶುವೈದ್ಯ ವಿಜ್ಞಾನದ ಸಲಹೆಗಾರನಾಗಿದ್ದ. 1932 ಜೂನ್ 22ರಂದು ಕೊಪನ್ ಹೆಗನ್‍ನಲ್ಲಿ ಗತಿಸಿದ.
(ಎಚ್.ಆರ್.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ